ಥೈರಾಯ್ಡ್: ಮಿಥ್ಯೆ ಮತ್ತು ತಪ್ಪುಗ್ರಹಿಕೆಗಳು
ಇಲ್ಲಿ ನಾವು ಥೈರಾಯ್ಡ್ ಕಾಯಿಲೆಗಳ ಸುತ್ತುವರೆದಿರುವ ಕೆಲವು ಮಿಥ್ಯೆ ಮತ್ತು ತಪ್ಪು ಕಲ್ಪನೆಗಳನ್ನು ದೂರ ಮಾಡಲು ಪ್ರಯತ್ನಿಸುತ್ತೇವೆ.
• [ಮಿಥ್ಯೆ] ಥೈರಾಯ್ಡ್ ರೋಗ ಒಂದು ಸಾಮಾನ್ಯ ಸಮಸ್ಯೆ ಅಲ್ಲ.
ತಪ್ಪು, ಥೈರಾಯ್ಡ್ ಮಧುಮೇಹದ ನಂತರ ಎರಡನೇ ಸಾಮಾನ್ಯ ಅಂತಃಸ್ರಾವಕ (ಎಂಡೊಕ್ರೈನ್) ರೋಗ. ಆದರೆ ಅನೇಕ ಸಂದರ್ಭಗಳಲ್ಲಿ ಅರಿವಿನ ಕೊರತೆಯಿಂದಾಗಿ ಪತ್ತೆಹಚ್ಚಲಾಗದೆ ಉಳಿಯಬಹುದು. ಇದಕ್ಕೆ ಕಾರಣ ಥೈರಾಯ್ಡ್ ಕಾಯಿಲೆಗಳು ಯಾವುದೇ ನಿರ್ದಿಸ್ಟ ರೋಗಲಕ್ಷಣಗಳನ್ನು ತೋರ್ಪಡಿಸದಿರುವುದು. ಉದಾ: ಹೆಚ್ಚು ಥೈರಾಯ್ಡ್ ಹಾರ್ಮೋನ್ ತೊಂದರೆಯಿದಾದ ನಿರಂತರವಾದ ಭೇದಿಗೆ ರೋಗಿ ಚಿಕಿತ್ಸೆಯನ್ನು ಪಡೆಯುತ್ತಲೇ ಇರಬಹುದು, ಆದರೆ ಥೈರಾಯ್ಡ್ ಇದಕ್ಕೆ ಮೂಲ ಕಾರಣ ಎಂದು ಅರಿವಿಗೆ ಬಾರದಿರಬಹುದು. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 42 ಮಿಲಿಯ ಜನರು ಥೈರಾಯ್ಡ್ ಸಂಭಂದಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಭಾರತದ ಹತ್ತು ಮಹಿಳೆಯರಲ್ಲಿ ಒಬ್ಬರು ಸಬ್ ಕ್ಲಿನಿಕಲ್ ಹೈಪೋಥೈರಾಯ್ಡಿಸಮ್-ನಿಂದ (ಸೌಮ್ಯ ಸ್ವರೂಪದ ಥೈರಾಯ್ಡ್ ವೈಫಲ್ಯ) ಬಳಲುತ್ತಿರಬಹುದು.
• [ಮಿಥ್ಯೆ] ನಾನು ಗರ್ಭಿಣಿಯಾದಲ್ಲಿ ಥೈರಾಕ್ಸಿನ್ ಮಾತ್ರೆ ನಿಲ್ಲಿಸಬೇಕು.
ಖಂಡಿತವಾಗಿಯೂ ಅಲ್ಲ! ಹಾಗೆ ಮಾಡಲೇಬೇಡಿ. ನೀವು ಹೈಪೋಥೈರಾಯ್ಡಿಸಂ ಹೊಂದಿದ್ದರೆ ಗರ್ಭಾಶಯದಲ್ಲಿನ ಭ್ರೂಣವು ತನ್ನ ಥೈರಾಕ್ಸಿನ್-ಗೆ ತಾಯಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಆದುದರಿಂದ ನೀವು ಗರ್ಭಧಾರಣೆಯ ಪೂರ್ತಿ ಅವಧಿಯ-ವರೆಗೆ ಥೈರಾಕ್ಸಿನ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಇದು ಶಿಶುವಿನ ಮೆದುಳಿನ ಸರಿಯಾದ ಬೆಳವಣಿಗೆಗೆ ಅತ್ಯಾವಶ್ಯಕ. ಗರ್ಭಾವಸ್ಥೆಯಲ್ಲಿ ಥೈರಾಕ್ಸಿನ್ ಡೋಸೇಜ್ ಹೊಂದಾಣಿಕೆಗಳು ತುಂಬಾ ಭಿನ್ನವಾಗಿರಬಹುದು. ಆದ್ದರಿಂದ ನಿಮ್ಮ ಹಾರ್ಮೋನ್ ತಜ್ನ ವೈದ್ಯರನ್ನು ಖಂಡಿತವಾಗಿಯೂ ಕಾಣಿರಿ. ನೆನಪಿಡಿ: ಹೈಪೋಥೈರಾಯ್ಡಿಸಂ-ಗೆ ಥೈರಾಕ್ಸಿನ್ ತೆಗೆದುಕೊಳ್ಳುವುದು ತಾಯಿ ಮತ್ತು ಶಿಶುವಿಗೆ ಸುರಕ್ಷಿತ, ಸಲಹೆಯಿಲ್ಲದೇ ನಿಲ್ಲಿಸುವದು ಅಪಾಯಕಾರಿಯಾಗಬಹುದು.
• [ಮಿಥ್ಯೆ] ನಾನು ಹೈಪೋಥೈರಾಯ್ಡಿಸಂ ಹೊಂದಿದ್ದರೆ ನಾನು ಕೆಲವು ಆಹಾರಗಳನ್ನು ತಿನ್ನಲು ಸಾಧ್ಯವಿಲ್ಲ.
ಕೋಸು, ಹೂಕೋಸು, ಟರ್ನಿಪ್ ಗೆಡ್ಡೆಗಳು, ಸಾಸಿವೆ ನಂತಹ ಕೆಲವು ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಗಳಗಂಡ (ಗಾಯ್ಟರ್) ಮತ್ತು ಹೈಪೋಥೈರಾಯ್ಡಿಸಂ ಉಂಟುಮಾಡಬಹುದು. ನಿಮ್ಮ ಥೈರಾಯ್ಡ್ ಈಗಾಗಲೇ ಕೆಲಸ ನಿಲ್ಲಿಸಿರುವ ಸಂದರ್ಭದಲ್ಲಿ ಮತ್ತು ನೀವು ಮಾತ್ರೆಗಳನ್ನು ಸೇವಿಸುತ್ತಿರುವಾಗ, ಯಾವುದೇ ಮೇಲಿನ ಆಹಾರ ಪದಾರ್ಥವನ್ನು ದೊಡ್ಡ ಪ್ರಮಾಣದ ಸೇವಿಸದೇ ಇದ್ದಲ್ಲಿ ಯಾವುದೇ ವಿಶೇಷ ಆಹಾರ ನಿರ್ಬಂಧ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಕಾಣಿರಿ.
• [ಮಿಥ್ಯೆ] ಶಸ್ತ್ರಚಿಕಿತ್ಸೆಯಿಂದ ಹೈಪೋಥೈರಾಯ್ಡಿಸಂ ಗುಣಪಡಿಸಬಹುದು.
ಇಲ್ಲ . ಶಸ್ತ್ರಚಿಕಿತ್ಸೆ ಆಯ್ದ ರೋಗಿಗಳಲ್ಲಿ ಹೈಪರ್ರ್ಥೈರಾಯ್ಡಿಸಮ್ –ಗೆ ಒಂದು ಚಿಕಿತ್ಸೆಯಾಗಿದೆ . ಹೈಪೋಥೈರಾಯ್ಡಿಸಂ –ನಲ್ಲಿ ನಿಮ್ಮ ಥೈರಾಯ್ಡ್ ಈಗಾಗಲೇ ಕಡಿಮೆ ಹಾರ್ಮೋನ್ ಉತ್ಪಾದಿಸುತ್ತಿರುತ್ತದೆ. ಶಸ್ತ್ರಚಿಕಿತ್ಸೆಯಿಂದ ಗ್ರಂಥಿಯನ್ನು ತೆಗೆದರೆ ಹಾರ್ಮೋನ್ ಮಟ್ಟ ಮತ್ತಷ್ಟು ಕುಸಿಯುತ್ತದೆ.
• [ಮಿಥ್ಯೆ] ಹೈಪೋಥೈರಾಯ್ಡಿಸಮ್ ಮಕ್ಕಳಲ್ಲಿ ಕಂಡುಬರುವುದಿಲ್ಲ.
ಇದು ಮಕ್ಕಳಲ್ಲಿ ವಯಸ್ಕರಲ್ಲಿ ಕಂಡುಬರುವುದಕ್ಕಿಂತ ವಿರಳವಾಗಿರುತ್ತವೆ, ಆದರೆ ಇದು ಗಂಭೀರ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ಮಿದುಳಿನ ಅಭಿವೃದ್ಧಿ ಪೂರ್ಣಗೊಳ್ಳುವ ಮೊದಲು (3 ವರ್ಷಗಳಿಗೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ) ಹೈಪರ್ರ್ಥೈರಾಯ್ಡಿಸಮ್ ಮಂದಬುದ್ಧಿಗೆ ಕಾರಣವಾಗುತ್ತದೆ. ಆ ವಯಸ್ಸಿನ ನಂತರವೂ ಎತ್ತರ ಹೆಚ್ಚಳದಲ್ಲಿ (ಬೆಳವಣಿಗೆ) ಕುಂಠಿತವಾಗಬಹುದು ಮತ್ತು ಮಗು ಕುಬ್ಜವಾಗಿ ಉಳಿಯಬಹುದು. ಈ ಎಲ್ಲಾ ಕಾರಣಗಳಿಂದ ಶೀಘ್ರ ಚಿಕಿತ್ಸೆ ಅವಶ್ಯ.
• [ಮಿಥ್ಯೆ] ನನ್ನ ತೂಕ ಹೆಚ್ಚಾದರೆ ಅದನ್ನು ಕಡಿಮೆಮಾಡಲು ನನ್ನ ಥೈರಾಕ್ಸಿನ್ ಪ್ರಮಾಣ ಹೆಚ್ಚಿಸುವ ಅಗತ್ಯವಿದೆ.
ಇಲ್ಲ. ಹೈಪೋಥೈರಾಯ್ಡಿಸಮ್ ತೂಕ ಹೆಚ್ಚಲು ಕಾರಣಗಳಲ್ಲಿ ಕೇವಲ ಒಂದು ಮಾತ್ರ, ಅದೂ ಕಡಿಮೆ ಪ್ರಮಾಣದಲ್ಲಿ. ನಿಮ್ಮ ವೈದ್ಯರ ದೃಷ್ಟಿಯಲ್ಲಿ ನಿಮ್ಮ ಹೈಪೋಥೈರಾಯ್ಡಿಸಮ್ ಸರಿಯಾದ ನಿಯಂತ್ರಣದಲ್ಲಿದ್ದಲ್ಲಿ ಥೈರಾಕ್ಷಿನ್ ಅತಿಬಳಕೆ (ಓವರ್- ಡೋಸ್) ) ಮಾಡಬೇಡಿ. ಇದು ನಿಮ್ಮ ಶರೀರಕ್ಕೆ ಒಳ್ಳೆಯದಲ್ಲ. ನಿಮ್ಮ ಆಹಾರ ಪದ್ಧತಿ , ಜೀವನ ಶೈಲಿ, ಹಾಗೂ ತೂಕ ಹೆಚ್ಚಲು ಕಾರಣವಾಗಬಹುದಾದ ಇತರ ಅಂಶಗಳ ಬಗ್ಗೆ ನಿಮ್ಮ ವೈದ್ಯರಲ್ಲಿ ಸಮಾಲೋಚಿಸಿ.
• [ಮಿಥ್ಯೆ] ಗ್ರೇವ್ಸ ಕಾಯಿಲೆ-ಗೆ ವಿಕಿರಣಶೀಲ ಅಯೋಡಿನ್ ಚಿಕಿತ್ಸೆ ಪಡೆದರೆ ಅದು ಬಂಜೆತನ ಉಂಟುಮಾಡುತ್ತದೆ.
ಇದು ಒಂದು ಹುಸಿ ನಂಬಿಕೆ. ಗ್ರೇವ್ಸ ಕಾಯಿಲೆ-ಗೆ ಕೊಡುವ ವಿಕಿರಣಶೀಲ ಅಯೋಡಿನ್ ಡೋಸ್ ತೀರಾ ಕಡಿಮೆ. ಇದು ಕ್ಯಾನ್ಸರ್ಗೆ ಕೊಡುವಂಥಹ ದೊಡ್ಡ ಪ್ರಮಾಣದ ಡೋಸ್ ಅಲ್ಲ. ಆದರೆ ನಿಮಗೆ ಸ್ವಲ್ಪ ಕಾಲದವರೆಗೆ ಗರ್ಭಧಾರಣೆಯ ತಡೆಗಟ್ಟಲು ನಿಮ್ಮ ವೈದ್ಯರು ಸಲಹೆ ಮಾಡಬಹುದು.
• [ಮಿಥ್ಯೆ] ದೀರ್ಘಕಾಲದವರೆಗೆ ಮಾತ್ರೆಗಳು (ಥೈರಾಯ್ಡ್ ಹಾರ್ಮೋನ್) ತೆಗೆದುಕೊಳ್ಳುವುದು ಅಪಾಯಕಾರಿ.
ಇಲ್ಲ. ಥೈರಾಕ್ಷಿನ್ ಮಾತ್ರೆಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಹೈಪೋಥೈರಾಯ್ಡಿಸಮ್ ಉಂಟುಮಾಡುವ ಆರೋಗ್ಯದ ತೊಂದರೆಗಳನ್ನು ದೂರವಿರಿಸಬಹುದು. ಇದೊಂದು ಪ್ರಾಕೃತಿಕ ಹಾರ್ಮೋನ್.
• [ಮಿಥ್ಯೆ] ನನಗೆ ಹೈಪೋಥೈರಾಯ್ಡಿಸಮ್ ಇದೆ. ಆದ್ದರಿಂದ ನನಗೆ ಯಾವತ್ತಿಗೂ ಗರ್ಭಧರಿಸಲು (ಮಕ್ಕಳಾಗಲು) ಸಾಧ್ಯವಿಲ್ಲ..
ಇದೊಂದು ಸಾಮಾನ್ಯ ತಪು ಕಲ್ಪನೆ. ಹೈಪೋಥೈರಾಯ್ಡಿಸಮ್ ಚಿಕಿತ್ಸೆ ಪಡೆಯದಿದ್ದರೆ ಮಾತ್ರ ಗರ್ಭಪಾತ ಉಂಟಾಗುವ ಇಲ್ಲವೇ ಬುದ್ಧಿಮಾಂದ್ಯ ಇರುವ ಮಗು ಜನಿಸುವ ಅಪಾಯವಿದೆ. ನಿಮ್ಮ ಎಂಡೋಕ್ರೈನಾಲಜಿಸ್ಟ್ ಅವರಿಂದ ನಿಮ್ಮ ಥೈರಾಯ್ಡ್ ಸರಿಯಾಗಿದೆಯೇ ಎಂದು ಪರೀಕ್ಷೆ ಮಾಡಿಸುವುದು ಒಳಿತು.
• [ಮಿಥ್ಯೆ] ಒಮ್ಮೆ ನನ್ನ ರಿಪೋರ್ಟ್ ನಾರ್ಮಲ್ ಅದರೆ, ನಾನು ಚೆನ್ನಾಗಿದ್ದೇನೆ ಎನಿಸಿದರೆ ಮಾತ್ರೆ ನಿಲ್ಲಿಸಬಹುದು.
ಇಲ್ಲ ಹಾಗೆ ಮಾಡಬೇಡಿ. ನೀವು ಚೆನ್ನಾಗಿದ್ದೇನೆ ಎನಿಸಿದರೂ ನಿಯಮಿತವಾಗಿ ಮಾತ್ರೆ ತೆಗೆದುಕೊಳ್ಳುವುದನ್ನು ಮುಂದುವರಿಸುವುದು ಅತಿ ಮುಖ್ಯ. ಚಿಕಿತ್ಸೆಯನ್ನು ಬದಲಿಸುವ ಇಲ್ಲವೇ ನಿಲ್ಲಿಸುವ ನಿರ್ಧಾರವನ್ನು ತಜ್ಞ ವೈದ್ಯರಿಗೆ ಬಿಡಿ.
• [ಮಿಥ್ಯೆ] ನಾನು ನಿನ್ನೆ ಥೈರಾಕ್ಸಿನ್ ಮಾತ್ರೆಗಳು ನಿಲ್ಲಿಸಿದೆ. ಇಂದು ನನ್ನ ಟಿಎಸ್ಎಚ್ ಟೆಸ್ಟ್ ಮಾಡಿಸಿದೆ. ಇದು ನಾರ್ಮಲ್ ಇದೆ. ಆದ್ದರಿಂದ ನಾನು ಚಿಕಿತ್ಸೆ ನಿಲ್ಲಿಸಬಹುದು?
ಇಲ್ಲ ಹಾಗೆ ಮಾಡಬೇಡಿ . ಥೈರಾಯ್ಡ್ ಹಾರ್ಮೋನ್ ಶರೀರದಲ್ಲಿ ಬಹುಕಾಲದವರೆಗೆ ಇರುತ್ತದೆ. ಈ ಪರೀಕ್ಷೆ ನಿಮ್ಮ ನಿಜವಾದ ಥೈರಾಯ್ಡ್ ಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ. ಚಿಕಿತ್ಸೆಯನ್ನು ಬದಲಿಸುವ ಇಲ್ಲವೇ ನಿಲ್ಲಿಸುವ ನಿರ್ಧಾರವನ್ನು ತಜ್ಞ ವೈದ್ಯರಿಗೆ ಬಿಡಿ.