ಹೈಪರ್ಥೈರಾಯ್ಡಿಸಮ್ ಪ್ರಾಥಮಿಕ ಮಾಹಿತಿ
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 

ಹೈಪರ್‌ಥೈರಾಯ್ಡಿಸಮ್

 

ಹೈಪರ್‌ಥೈರಾಯ್ಡಿಸಮ್ ನಿಮ್ಮ ಶರೀರದಲ್ಲಿ ಅಧಿಕ ಥೈರಾಯ್ಡ್ ಹಾರ್ಮೋನ್ ಉತ್ಪಾದನೆ ಅಥವಾ ಪರಿಣಾಮದಿಂದ ಉಂಟಾಗುತ್ತದೆ. ಇದನ್ನು ಥೈರೋಟಾಕ್ಸಿಕೋಸಿಸ್ ಎಂದು ಕರೆಯುವುದು ಹೆಚ್ಚು ಸಮಂಜಸ ಎಂದು ವೈದ್ಯರ ಅಂಬೋಣ. ಸರಿ ಸಧಾರಣ 1% ಜನರು ಈ ತೊಂದರೆಯಿಂದ ಬಳಳುತ್ತಾರೆ. ಇದು ಮಹಿಳೆಯರಲ್ಲಿ ಪುರುಷರಿಗಿಂತಲೂ ಹತ್ತು ಪಟ್ಟು ಹೆಚ್ಚಾಗಿ ಕಂಡುಬರುತ್ತದೆ.

ಹೈಪರ್‌ಥೈರಾಯ್ಡಿಸಮ್

ಹೈಪರ್‌ಥೈರಾಯ್ಡಿಸಮ್

ಹೈಪರ್‌ಥೈರಾಯ್ಡಿಸಮ್  ತೀವ್ರತರವಾದ ರೋಗಲಕ್ಷಣಗಳ್ಳನ್ನು (ಅಪರೂಪಕ್ಕೆ ಜೀವಕ್ಕೆ ಅಪಾಯವಾಗುವಂಥಹ) ತೋರ್ಪಡಿಸಬಹುದು. ಆದರೆ ಸೌಮ್ಯ ರೂಪದ ಕಾಯಿಲೆ ಯಾವುದೇ ತೆರನಾದ ಲಕ್ಷಣ ತೋರಿಸದೇ ಇರಬಹುದು. ಇಂಥಹ ಸಂದರ್ಭಗಳಲ್ಲಿ ರೋಗಿಯ ಗಮನಕ್ಕೆ ಬರುವುದೇ ಇಲ್ಲ.   

ಈ ರೀತಿಯಾದ ಸೌಮ್ಯ ರೋಗ ಇತರ ಯಾವುದೋ ಕಾರಣಕ್ಕೆ ಥೈರಾಯ್ಡ್ ಪರೀಕ್ಷೆ ಮಾಡಿದಾಗ ಗಮನಕ್ಕೆ ಬರಬಹುದು. ಇವುಗಳೆಂದರೆ: ಕಣ್ಣುಗಳ ಊತ, ಸಿಟ್ಟಿನಿಂದ ದಿಟ್ಟಿಸಿ ನೋಡುತ್ತಿರುವಂತೆ ಕಾಣುವ ಕಣ್ಣುಗಳು, ಜನರಲ್ ಹೆಲ್ತ್ ಚಕಪ್, ಗರ್ಭವತಿಯಾದಾಗ ಮಾಡುವ ಪರೀಕ್ಷೆ ಇತ್ಯಾದಿ.

 

ಹೈಪರ್‌ಥೈರಾಯ್ಡಿಸಮ್ –ಗೆ ಕಾರಣಗಳು:

ಥೈರಾಯ್ಡ್ ಆರ್ಬೈಟೋಪತಿ

ಗ್ರೇವ್ಸ್ ಆರ್ಬೈಟೋಪತಿ

ಗ್ರೇವ್ಸ್ ಕಾಯಿಲೆ : ಇದು ಹೈಪರ್‌ಥೈರಾಯ್ಡಿಸಮ್ –ಗೆ ಅತ್ಯಂತ ಸಾಮಾನ್ಯ ಕಾರಣ. ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ರೋಗಿಗೆ ಥೈರಾಯ್ಡ್ ಬಾವು (ಗಾಯ್ಟರ್ ಅಥವಾ ಗಳಗಂಡ) ಬರಬಹುದು, ಕೆಲವೊಮ್ಮೆ ಕಣ್ಣುಗಳಲ್ಲಿಯೂ ಬಾವು ಹಾಗೂ ಇತರ ತೊಂದರೆ ಬರಬಹುದು ಥೈರಾಯ್ಡ್  ಆರ್ಬೈಟೋಪತಿ. ರೋಗಿಗೆ ವಸ್ತುಗಳು ಎರಡೆರಡಾಗಿ ಕಾಣಬಹುದು.

ಥೈರಾಯ್‌ಡೈಟಿಸ್

A.ನಾರ್ಮಲ್ ಗ್ರಂಥಿ B.ಥೈರಾಯ್‌ಡೈಟಿಸ್

ಥೈರಾಯ್‌ಡೈಟಿಸ್ : ಥೈರಾಯ್ಡ್ ಗೃಂಥಿಯ ಉರಿಯೂತದಿಂದ ಈ ತೊಂದರೆ ಉಂಟಾಗುತ್ತದೆ. ಇದರಿಂದಾಗಿ : ಥೈರಾಯ್ಡ್ ಗೃಂಥಿಯಲ್ಲಿ ಸಂಗ್ರಹವಾಗಿರುವ ಹಾರ್ಮೋನ್ ರಕ್ತಕ್ಕೆ ಅನಿಯಂತ್ರಿತವಾಗಿ ಸೋರಿಕೆಯಾಗುತ್ತದೆ. ಈ ರೀತಿಯಾಗಿ ರಕ್ತದಲ್ಲಿ ಹೆಚ್ಚಿರುವ ಥೈರಾಯ್ಡ್ ಹಾರ್ಮೋನಿನಿಂದ ಅನೇಕ ರೋಗಲಕ್ಷಣ ಕಂಡುಬರುತ್ತದೆ. ರೋಗಿಗೆ ಕತ್ತಿನಲ್ಲಿ (ಥೈರಾಯ್ಡ್-ನಲ್ಲಿ) ನೋವು ಕೂಡಾ ಉಂಟಾಗಬಹುದು.

ಥೈರಾಯ್‌ಡೈಟಿಸ್ ಹೆಚ್ಚಾಗಿ ಮಹಿಳೆಯರಲ್ಲಿ ಪ್ರಸವದ ನಂತರ ಉಂಟಾಗುತ್ತದೆ. ದುರದೃಷ್ಟವಷಾತ್ ಅನೇಕ ವೇಳೆ ಇದನ್ನು ರೋಗಿ ಮತ್ತು ಪಾಲಕರ ನಿರ್ಲಕ್ಷಕ್ಕೆ ಒಳಗಾಗುತ್ತದೆ, ಇದರಿಂದ ನವ ಮಾತೆಗೆ ಹೇಳಲಾರದ ತೊಂದರೆಗಳು ಆಗಿ ಅವಳು ತಾಯ್ತನದ ಆನಂದದಿಂದ ವಂಚಿತಳಾಗಬಹುದು. ಪ್ರಸವಾನಂತರದ ಖಿನ್ನತೆ ಇದನ್ನು ಇನ್ನೂ ಹೆಚ್ಚು ತೊಂದರೆದಾಯಕವಾಗಿಸಬಹುದು.

ಮಲ್ಟಿ ನೋಡುಲರ್ ಗಾಯ್ಟರ್: ಅನೇಕಾನೇಕ ವರ್ಷಗಳಿಂದ ದೊಡ್ಡದಾದ / ಉತುಕೊಂಡ ಥೈರಾಯ್ಡ್ ಕೊನೆಗೊಂದು ದಿನ ಅನಿಯಂತ್ರಿತವಾಗಿ ಅಧಿಕ ಹಾರ್ಮೋನ್ ತಯಾರುಮಾಡುವ ದುರ್ವರ್ತನೆಯನ್ನು ತೋರಬಹುದು.

Toxic Adenoma

ಟಾಕ್ಷಿಕ್ ಎಡಿನೋಮಾ

ಟಾಕ್ಷಿಕ್ ಎಡಿನೋಮಾ: ಥೈರಾಯ್ಡ್  ಗೃಂಥಿಯಲ್ಲಿ ಬೆಳೆದ ಒಂದೇ ಒಂದು ಗಂಟು ಸರ್ವಾಧಿಕಾರಿಯಂತೆ ವರ್ತಿಸತೊಡಗಬಹುದು. ಈ ರೀತಿಯಾದ ತನ್ನ ಅತಿರೇಕದ ಕೆಲಸದಿಂದ ತನ್ನ ಒಡೆಯನನ್ನು  (ರೋಗಿ) ಹೈಪರ್‌ಥೈರಾಯ್ಡಿಸಮ್-ಗೆ ತಳ್ಳಬಹುದು.

ಅಯೋಡಿನ್ ಅತಿರೇಕ: ಸ್ವಯಂ ವೈದ್ಯನ ಮೌಢ್ಯವೋ ಅಥವಾ ಅಳಲೆಕಾಯಿ ಪಂಡಿತನ ಮೂರ್ಖತನದಿಂದಲೋ, ಏನೇ ಆಗಲಿ, ಅಯೋಡಿನ್ ಅತಿ ಸೇವನೆ ಥೈರಾಯ್ಡ್ ತೊಂದರೆಗೆ ಬುನಾದಿ. ಇದು ಕೆಮ್ಮಿನ ಸಿರಪ್ ಇರಬಹುದು ಅಥವಾ ಕಷಾಯ ಅಥವಾ ಭಸ್ಮ ರೂಪದಲ್ಲಿ ಇಲ್ಲವೇ ಕೆಲ್ಪ್ ಮಾತ್ರೆ ಇರಬಹುದು.

ಔಷಧಿಗಳು: ಹಾರ್ಟ್ ತೊಂದರೆಗೆ ಕೊಡುವ ಔಷಧಿ ಅಮಿಯೊಡರೋನ್, ಕಾರ್ಡರೋನ್, ಸಿ‌.ಟಿ. ಸ್ಕ್ಯಾನ್-ಗೆ ಬಳಸುವ ಕಾಂಟ್ರಾಸ್ಟ್-ಗಳಲ್ಲಿರುವ ಅಯೋಡಿನ್ನಿಂದಲೂ ಈ ತೊಂದರೆ ಬರಬಹುದು. ಅತಿಯಾದರೆ ಅಮೃತವೂ ವಿಷವಾದಂತೆ ಈ ಅಯೋಡಿನ್.

 

ಥೈರಾಯ್ಡ್ ಹಾರ್ಮೋನ್ ಹೆಚ್ಚಳದಿಂದ ನಿಮ್ಮ ದೇಹ ಮತ್ತು ಮನಸ್ಸಿನಲ್ಲಿ ಯಾವ ರೀತಿಯ ಬದಲಾವಣೆ (ರೋಗಲಕ್ಷಣ) ಉಂಟಾಗಬಹುದು?

 • ಮನದಲ್ಲಿ ಆತಂಕ, ಸಿಡುಕುತನ / ಮುಂಗೋಪಿಯಾಗುವುದು, ವಿವಾದಶೀಲರಾಗುವುದು (ಸದಾ ವಾದ ಮಾಡುವುದು), ಯಾವತ್ತೂ ಸಿಟ್ಟಿನಲ್ಲಿರುವುದು ಇತ್ಯಾದಿ.
 • ಕೈ ಕಾಲು ನಡುಗುವುದು ಅಭದ್ರತೆಯ ಭಾವ.
 • ಅತಿಯಾದ ಕೂದಲು ಉದುರುವಿಕೆ
 • ನಿದ್ರೆ ಬೀಳುವಲ್ಲಿ ತೊಂದರೆ / ನಿದ್ರಾಹೀನತೆ
 • ಮಾಂಸಖಂಡಗಳಲ್ಲಿ ಬಲಹೀನತೆ (ಉದಾ: ಖುರ್ಚಿಯಿಂದ ಎಳಲು ತೊಂದರೆ)
 • ಹೆಚ್ಚು ಹಸಿವು, ಚೆನ್ನಾಗಿ ತಿಂದರೂ ಕಡಿಮೆಯಾಗುತ್ತಿರುವ ತೂಕ
 • ಆಗಾಗ್ಗೆ ಮಲ ವಿಸರ್ಜನೆಗೆ ಹೋಗಬೇಕಾಗುವುದು.
 • ಅತಿಯಾದ ಹೃದಯ ಬಡಿತ (ಎದೆ ಹೊಡೆದುಕೊಳ್ಳುವುದು)
 • ಕಣ್ಣುಗಳ ಹೊರಚಾಚುವಿಕೆ (ದುರುಗುಟ್ಟಿ ಅಥವಾ ಸಿಟ್ಟಿನಿಂದ ನೋಡಿದಂತೆ)
 • ಅತಿಯಾದ ಬೇಗೆ / ಬೆವರು ಬರುವುದು (ಯಾವಗಲೂ ಫ್ಯಾನ್ ಬೇಕೆನಿಸುವುದು).
 • ಋತುಚಕ್ರ / ತಿಂಗಳ ಮುಟ್ಟು ಸರಿಯಾಗದಿರುವುದು / ಏರುಪೇರು
 • ಗರ್ಭಪಾತ / ಭ್ರೂಣ ನಷ್ಟ –ಕ್ಕೆ ಕಾರಣವಾಗಬಹುದು
 • ಸಕಾರಣವಿಲ್ಲದೇ ಮೂಳೆ ಮುರಿತ / ಕಡಿಮೆ ಪೆಟ್ಟಿನ ಮೂಳೆ ಮುರಿತ

 

ಹೈಪರ್‌ಥೈರಾಯ್ಡಿಸಮ್  ಪತ್ತೆಗಾಗಿ ಮಾಡುವ ಪರೀಕ್ಷೆಗಳು

ಟಿ‌ಎಸ್‌ಎಚ್ (TSH), ಫ್ರೀ. ಟಿ-4 (f T4) ನಂತಹ ರಕ್ತ ಪರೀಕ್ಷೆಯಿಂದ ಹೈಪರ್‌ಥೈರಾಯ್ಡಿಸಮ್  ಇದೆಯೇ ಎಂದು ಪತ್ತೆ ಹಚ್ಚಬಹುದು. ಥೈರಾಯ್ಡ್  ಪ್ರತಿಕಾಯ (Thyroid antibodies), ಥೈರಾಯ್ಡ್ ಸ್ಕ್ಯಾನ್ ಇತರ ವಿಶೇಷ ಪರೀಕ್ಷೆಗಳನ್ನೂ ನಿಮ್ಮ ವೈದ್ಯರು ಮಾಡಿಸಬಹುದು. ಈ ಎಲ್ಲ ಪರೀಕ್ಷೆಗಳು ನಿಮ್ಮ ಥೈರಾಯ್ಡ್ ಯಾತಕ್ಕಾಗಿ ಅಸಹಜವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿಯಲು ಸಹಕಾರಿ.

 

ಹೈಪರ್‌ಥೈರಾಯ್ಡಿಸಮ್ ಚಿಕಿತ್ಸೆ:

ಥೈರಾಯ್ಡ್ ತೊಂದರೆಗೆ ಸೂಕ್ತವಾದ ಮತ್ತು ಕರಾರುವಾಕ್ಕಾದ ಚಿಕಿತ್ಸೆ ನೀಡಲು ವಿಶೇಷ ತರಬೇತಿಯು ಅವಶ್ಯಕ. ಎಂಡೋಕ್ರೈನಾಲಜಿಸ್ಟ್ ವೈದ್ಯರು ಹೈಪರ್‌ಥೈರಾಯ್ಡಿಸಮ್  -ಗೆ  ಸೂಕ್ತವಾಗಿ ಚಿಕಿತ್ಸೆ ನೀಡುವ ಕೌಶಲ್ಯ ಹೊಂದಿರುತ್ತಾರೆ.

ಚಿಕಿತ್ಸೆ ವಿಧಾವನ್ನು ಆಯ್ಕೆ ಮಾಡುವಲ್ಲಿ ರೋಗದ ತೀವ್ರತೆ ವಿಧ ಹಾಗೂ ಅಷ್ಟೇ ಮುಖ್ಯವಾಗಿ ರೋಗಿಯ ಇಷ್ಟಗಳನ್ನೂ ಪರಿಗಣಿಸಿ ನಿರ್ಧರಿಸಲಾಗುತ್ತದೆ. ಸ್ಥೂಲವಾಗಿ ಹೇಳುವುದಾದರೆ ಹೈಪರ್‌ಥೈರಾಯ್ಡಿಸಮ್  ಚಿಕಿತ್ಸೆಗಾಗಿ ಮೂರು ವಿಧಾನಗಳಿವೆ:

ಮೆಡಿಕಲ್ (ಔಷಧೀಯ): ಥೈರಾಯ್ಡ್ ಪ್ರತಿರೋಧಕ ಔಷಧಿ – ಮೇಥಿಮಜೋಲ್ (ನಿಯೋಮರ್ಕಜೋಲ್, ಥೈರೋಕ್ಯಾಬ್) , ಪ್ರೊಪೈಲ್‌ಥೈಯೊಯುರಸಿಲ್ (ಪಿಟಿಯು) ಇತ್ಯಾದಿ... ಯಾವುದೇ ಅಲರ್ಜಿ ಉಂಟಾದಲ್ಲಿ ಈ ಔಷಧಿ ನಿಲ್ಲಿಸಬೇಕಾಗಬಹುದು.

ರೇಡಿಯೊಆಕ್ಟಿವ್ ಅಯೋಡಿನ್

ವಿಕಿರಣಶೀಲ (ರೇಡಿಯೊಆಕ್ಟಿವ್) ಅಯೋಡಿನ್

ವಿಕಿರಣಶೀಲ (ರೇಡಿಯೊಆಕ್ಟಿವ್) ಅಯೋಡಿನ್ ಚಿಕಿತ್ಸೆ:

ಅಯೋಡಿನ್ ಥೈರಾಯ್ಡ್ ಗೃಂಥಿಯ ಕಾರ್ಯನಿರ್ವಹಣೆಯಲ್ಲಿ  ಅವಿಭಾಜ್ಯ ಅಂಗ. ಆದುದರಿಂದ ವಿಕಿರಣ ಉಳ್ಳ ಅಯೋಡಿನ್ ಅನ್ನು ಥೈರಾಯ್ಡ್ ಗೃಂಥಿ ಆಕರ್ಷಿಸುತ್ತದೆ ಹಾಗೂ ಇದನ್ನು ಶೇಕರಿಸುತ್ತದೆ. ಹೀಗೆ ವಿಪರೀತವಾಗಿ ವರ್ತಿಸುತ್ತಿರುವ ಥೈರಾಯ್ಡ್ ಗೃಂಥಿಯು  ಸಣ್ಣ ಡೋಸ್ ವಿಕಿರಣ ಉಳ್ಳ ಅಯೋಡಿನ್-ಗೆ ಸುಲಭವಾಗಿ ತುತ್ತಾಗುತ್ತದೆ. ಈ ಡೋಸ್ ಶಿರೀರಕ್ಕೆ ಇತರ ಹಾನಿಯುಂಟುಮಾಡಲು ತೀರಾ ಚಿಕ್ಕದು. ಇದು ಕೇವಲ ರೋಗಪೀಡಿತ  ಥೈರಾಯ್ಡ್  ಗೃಂಥಿಯನ್ನು ಮಾತ್ರ ನಾಶ ಮಾಡುತ್ತದೆ.

ಲಾಕ್ಷಾನುಗಟ್ಟಲೆ ರೋಗಿಗಳು ವಿಕಿರಣಶೀಲ (ರೇಡಿಯೋಆಕ್ಟಿವ್) ಅಯೋಡಿನ್ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಅಮೇರಿಕಾದ ಮಾಜಿ ಅಧ್ಯಕ್ಷರಾದ ಜಾರ್ಜ್ ಬುಷ್ ಹಾಗೂ ಅವರ ಪತ್ನಿ ಬರ್ಬಾರ ಅವರೂ ಹೈಪರ್‌ಥೈರಾಯ್ಡಿಸಮ್ –ಗೆ ಈ ಚಿಕಿತ್ಸೆ ಪಡೆದಿದ್ದಾರೆ. ಈ ಚಿಕಿತ್ಸೆಯನ್ನು ಹೊರ-ರೋಗಿಯಾಗಿಯೇ ಪಡೆಯಬಹುದಾಗಿದೆ, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ.

ಕೇವಲ ಸ್ವಲ್ಪವೇ ಮಾತ್ರ ನಾಶಪಡಿಸಲು ಸಾಧ್ಯವಿಲ್ಲ ಏಕೆಂದರೆ ಇಡಿಯ ಗೃಂಥಿಯು ರೋಗಗೃಸ್ಥವಾಗಿರುತ್ತದೆ. ಚಿಕಿತ್ಸೆಯ ನಂತರ ರೋಗಿಯು   ಥೈರಾಯ್ಡ್  ಹಾರ್ಮೋನ್ ಮಾತ್ರೆಗಳನ್ನು ನಿಯಮಿತವಾಗಿ ತಿನ್ನಬೇಕು.

ಶಸ್ತ್ರ ಚಿಕಿತ್ಸೆ: ಶಸ್ತ್ರ ಚಿಕಿತ್ಸೆಯ ಮೂಲಕ ರೋಗ ಪೀಡಿತ ಥೈರಾಯ್ಡ್ ಗೃಂಥಿಯನ್ನು ತೆಗೆದು ಹಾಕಬಹುದು.  ಶಸ್ತ್ರ ಚಿಕಿತ್ಸೆಯ ತೊಂದರೆ ಹಾಗೂ ಅಪಾಯದ ಇತ್ಯಾದಿ ಕಾರಣಗಳಿಂದ ಇದು  ಸಾಮಾನ್ಯವಾಗಿ ಮೊದಲ ಆಯ್ಕೆ ಆಗಿರುವುದಿಲ್ಲ. ಆದರೂ ಇದು ಕೆಲವೊಂದು ಸಂಧರ್ಭಗಳಲ್ಲಿ ಅನಿವಾರ್ಯ. ನುರಿತ ಹಾರ್ಮೋನ್ ತಜ್ನರೊಂದಿಗೆ ವೈಯುಕ್ತಿಕ ಸಲಹೆ ಅವಶ್ಯಕ.

 ನಿಮ್ಮ ಎಂಡೋಕ್ರೈನಾಲಜಿಸ್ಟ್ ವೈದ್ಯರು ನಿಮ್ಮ ಆರಾಮಕಾಗಿ ಇತರ ಔಷಧಿಗಳನ್ನೂ ನೀಡಬಹುದು ಉದಾ: ಬೀಟಾ-ಬ್ಲಾಕರ್ಸ್, ಕ್ಯಾಲ್ಸಿಯಮ್, ಇತ್ಯಾದಿ.

 

ಇತರ ಯಾವುದೇ ತೊಡಕುಗಳು ತಲೆದೋರಬಹುದೇ?

ಚಿಕಿತ್ಸೆಯಿಲ್ಲದ ಥೈರಾಯ್ಡ್-ನ ಬೆನ್ನಲ್ಲಿ ಓಟ ಕಿತ್ತಿದ ನಿಮ್ಮ ಹೃದಯ ಕೊನೆಗೂ ದಣಿವು ತಾಳಲಾರದೇ ಕೈಗೊಡಬಹುದು, ಹಾಗೆ ಹಾರ್ಟ್ ಫೈಲ್ಯರ್ ಉಂಟಾಗಬಹುದು. ಅದೇ ರೀತಿ ಅತಿ ವೇಗದಿ ಬಡಿದುಕೊಳ್ಳುತ್ತಿರುವ ನಿಮ್ಮ  ಹೃದಯ ತನ್ನ ಲಯ ಕಳೆದುಕೊಂಡು ಎಟ್ರಿಯಲ್ ಫಿಬ್ರಿಲೇಷನ್-ಗೆ ತುತ್ತಾಗಬಹುದು.

ಅತಿಯಾದ ಥೈರಾಯ್ಡ್ ಹಾರ್ಮೋನ್ ನಿಮ್ಮ  ಮೂಳೆಗಳ ಕ್ಯಾಲ್ಸಿಯಮ್ ಅನ್ನು ದೋಚಬಹುದು. ಈ ರೀತಿಯಾಗಿ ಕೃಶಗೊಂಡ ಎಲುಬುಗಳು ಚಿಕ್ಕದೊಂದು ಪೆಟ್ಟಿಗೂ  ಸುಲಭದಲ್ಲಿ ಮುರಿದು ಪುಡಿಯಾಗಬಹುದು.

ಥೈರಾಯ್ಡ್ ಉಂಟುಮಾಡುವ ಕಣ್ಣುಗಳ ತೊಂದರೆ ಕೆಲವೊಮ್ಮೆ ತೀವ್ರ ಸ್ವರೂಪ ಪಡೆಯಬಹುದು . ಇದರಿಂದ ವಸ್ತುಗಳು ಎರಡೆರದಾಗಿ ಕಾಣಿಸಬಹುದು, ದೃಷ್ಟಿ ಮಸುಕಾಗಬಹುದು, ತಲೆನೋವು ಕಾಣಿಸಿಕೊಳ್ಳಬಹುದು, ಅಪರೂಪಕ್ಕೆ ಕಣ್ಣಿನ ದೃಷ್ಟಿ ಕೂಡ ನಾಶವಾಗಿ ಅಂಧತ್ವಕ್ಕೆ ಕಾರಣವಾಗಬಹುದು.  

ನೀವು ಧೂಮಪಾನ (ಬೀಡಿ , ಸಿಗರೇಟ್ , ಚುಟ್ಟ ) ಮಾಡಿದರೆ ಥೈರಾಯ್ಡ್ ದಾಳಿಯಿಂದ ತತ್ತರಿಸಿದ ಕಣ್ಣುಗಳು ಇನ್ನು ಹೆಚ್ಚು ಘಾಸಿಗೊಳ್ಳಬಹುದು.

ಹೈಪರ್‌ಥೈರಾಯ್ಡಿಸಮ್  ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರೆ ಅದು ಸೃಸ್ಟಿಸಿದ ಪ್ರಚಂಡ ಚಂಡಮಾರುತದ (thyroid storm) ಬಿಕಟ್ಟಿನಲ್ಲಿ ಸಿಲುಕಿ  ದೇಹವು ಆಹುತಿಯಾಗಬಹುದು.

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

ಡಾ. ಗುರುರಾಜ ರಾವ್
ಆರೋಗ್ಯ ಪಾಲಿಕ್ಲಿನಿಕ್
2ನೆಯ ಮಹಡಿ, ಕಾವೆರಿ ಬಿಲ್ಡಿಂಗ್,
ಯುನಿಟಿ ಆಸ್ಪತ್ರೆ ಹತ್ತಿರ
ಫಳ್ನೀರ್ ರಸ್ತೆ
ಮಂಗಳೂರು
ಕರ್ನಾಟಕ

ಸಮಯ:
8AM - 1PM & 3.30PM - 7.30PM.
2/4ನೆಯ ಶುಕ್ರವಾರ ಹಾಗೂ ಭಾನುವಾರ* ರಜೆ
ಸಮಾಲೋಚನೆಗೆ ಮುಂಚಿತವಾಗಿ ಅಪಾಯಿಂಟ್ಮೆಂಟ್ ಅವಶ್ಯಕ
ಅಪಾಯಿಂಟ್ಮೆಂಟ್ : +91-9481353667

ಮುಂದಿನ ಭಾನುವಾರದ ವಿಶೇಶ ಓಪಿಡಿ 8AM-12PM 9-Feb