ಇನ್ಸುಲಿನ್ ಪಂಪ್||ಸಕ್ಕರೆಯ ನಿಖರ ನಿಯಂತ್ರಣ !
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 

ಇನ್ಸುಲಿನ್ ಪಂಪ್

ನಿಮ್ಮ ಸಕ್ಕರೆ ಕಾಯಿಲೆಯ ಚಿಕಿತ್ಸೆಯಲ್ಲಿ ಒಂದು ಹೊಸ ಆಯಾಮ

 

ನಿಮ್ಮ ಮಧುಮೇಹದ ಚಿಕಿತ್ಸೆಗೆ ಇನ್ಸುಲಿನ್ ತೆಗೆದುಕೊಳ್ಳಬೇಕಾದಲ್ಲಿ, ಇನ್ಸುಲಿನ್ ಪಂಪ್ ನಿಮ್ಮ ದೇಹಕ್ಕೆ ಬೇಕಾದಷ್ಟೇ ಪ್ರಮಾಣದ ಇನ್ಸುಲಿನ್ ಅನ್ನು ಕರಾರುವಕ್ಕಾಗಿ ಸರಿಯಾದ ಸಮಯ ಮತ್ತು ಪ್ರಮಾಣದಲ್ಲಿ ಪೂರೈಸುತ್ತದೆ.

ನಿಮ್ಮ ಮಧುಮೇಹದ ನಿಯಂತ್ರಣವನ್ನು ಉತ್ತಮಗೊಳಿಸುವುದು ಹಾಗೂ ನಿಮ್ಮ ಜೀವನ ಶೈಲಿ ಹಾಗೂ ಆಹಾರದ ವಿಹಾರದಲ್ಲಿ ಸ್ವಾತಂತ್ರ್ಯದಲ್ಲಿ ನಿಮಗೆ ಹೊಸ ಆಯಾಮ ನೀಡುವುದು ಇನ್ಸುಲಿನ್ ಪಂಪಿನ ಉದ್ದೇಶ. ಇದು ನಿಮ್ಮ ಜೀವನ ಶೈಲಿಯನ್ನು ಮಧುಮೇಹದ ಸಂಕೋಲೆಯಿಂದ ಬಿಡುಗಡೆಗೊಳಿಸಬಹುದು.

ಇನ್ಸುಲಿನ್ ಪಂಪ್

ಇನ್ಸುಲಿನ್ ಪಂಪ್

 • ಪೇಜರ್ ಅಥವಾ ಮೊಬೈಲ್ ದೂರವಾಣಿ ಧರಿಸುವಂತೆಯೇ ಧರಿಸಬಹುದು.
 • ಪಂಪ್ ಅನ್ನು ಪ್ಲಾಸ್ಟಿಕ್ ನಳಿಕೆಯ ಮೂಲಕ ಕ್ಯಾನುಲಾದಿಂದ ಇನ್ಸುಲಿನ್ ದೇಹವನ್ನು ಸೇರುತ್ತದೆ.
 • ಇದು ಪ್ರೋಗ್ರಾಮ್ ಮಾಡಲಾದ ಮಟ್ಟದಲ್ಲಿ 24x7x365 ಇನ್ಸುಲಿನ್ ಅನ್ನು ಪಂಪ್ ಮಾಡುತ್ತದೆ.
 • ಪ್ರೋಗ್ರಾಮ್ ಮಾಡಿದಷ್ಟೇ ಪ್ರಮಾಣದಲ್ಲಿ ಇನ್ಸುಲಿನ್ ನೀಡುತ್ತದೆ.
 • ಟ್ಯೂಬ್ ಬ್ಲಾಕ್ ಆದಲ್ಲಿ ಎಚ್ಚರಿಕೆ ಘಂಟೆ ಬಾರಿಸುತ್ತದೆ.
 • ಬೇಸಲ್ ಗತಿ: ನಿಮ್ಮ ದೇಹಕ್ಕೆ 24 ಘಂಟೆಯೂ (ಆಹಾರ ಹೊರತುಪಡಿಸಿ) ಬೇಕಾಗುವ ಸಣ್ಣ ಪ್ರಮಾಣದ ಇನ್ಸುಲಿನ್.
 • ಬೋಲಸ್ ಡೋಸ್: ಊಟವನ್ನು ಸರಿದೂಗಿಸಲು ಬೇಕಾದ ಇನ್ಸುಲಿನ್.
 • CGMS ನಿಮ್ಮ ಚರ್ಮದ ಅಡಿ ಭಾಗದ ಸಕ್ಕರೆಯನ್ನು ಸತತವಾಗಿ ಅಳೆಯುತ್ತದೆ.
 • ಈ ಮಾಹಿತಿಯನ್ನು ರೇಡಿಯೋ ಅಲೆಗಳ ಮೂಲಕ ಪಂಪ್-ಗೆ ತಲುಪಿಸುತ್ತದೆ.
 • ಪಂಪ್ ಈ ಮಾಹಿತಿಯನ್ನು ಸಂಗ್ರಹಿಸುತ್ತದೆ ಹಾಗೂ ಪರದೆಯ ಮೇಲೆ ತೋರಿಸುತ್ತಾ ಇರುತ್ತದೆ.
 • ಸಕ್ಕರೆಯ ಮಟ್ಟ ತೀರಾ ಕಾಡಿಮೆ ಆದರೆ ಎಚ್ಚರಿಕೆ ನೀಡಬಹುದು ಹಾಗೂ ಇನ್ಸುಲಿನ್ ನೀಡುವಿಕೆ ತಾತ್ಕಾಲಿಕವಾಗಿ ನಿಲ್ಲಿಸಬಹುದು.

 

 

ಯಾರು ಇನ್ಸುಲಿನ್ ಪಂಪ್ ಬಳಸಬಹುದು?

ಇನ್ಸುಲಿನ್ ಪಂಪ್ ಟೈಪ್-1 ಅಥವಾ ಜುವೆನೈಲ್ ಡಯಬೇಟಿಸ್ ರೋಗಿಗಳಿಗೆ ಉಪಯುಕ್ತ. ಅದೇ ರೀತಿಯಾಗಿ ಅತಿ ಸಾಮಾನ್ಯವಾದ ಕೆಲ ಟೈಪ್-2 ಮಧುಮೇಹ ಇರುವ ರೋಗಿಗಳಿಗೂ ಉಪಯುಕ್ತ. ಅಮೇರಿಕಾ ರಾಷ್ಟ್ರದಲ್ಲಿ ಟೈಪ್-1 ಮಧುಮೇಹ ಇರುವ ಮಕ್ಕಳು ಇದನ್ನು ಸಾಮಾನ್ಯವಾಗಿ (20-30%) ಬಳಸುತ್ತಾರೆ, ಆದರೆ ನಮ್ಮ ದೇಶದಲ್ಲಿ ಇದರ ಬಳಕೆ ಇದುವರೆಗೂ ಕಡಿಮೆ ಆಗಿದೆ.

ಇನ್ಸುಲಿನ್ ಪಂಪ್ ಬಳಸಲು ಸೂಕ್ತವಾದ ರೋಗಿಯ ಲಕ್ಷಣಗಳೇನು?

ನಿಮ್ಮ ಮಧುಮೇಹದ ನಿಯಂತ್ರಣಕ್ಕೆ ಇನ್ಸುಲಿನ್ ಅವಶ್ಯಕವಾಗಿದಲ್ಲಿ ಹಾಗೂ:

 • ನಿಮಗೆ ಅತ್ಯುತ್ತಮ ಮಟ್ಟದ ನಿಯಂತ್ರಣ ಬಯಸಿದಲ್ಲಿ
 • ಪದೇ ಪದೇ ಹೈಪೋಗ್ಲೈಸೆಮಿಯಾ (ಕಡಿಮೆ ರಕ್ತದ ಸಕ್ಕರೆ) ಅಥವಾ ತೀವ್ರತರವಾದ ಹೈಪೋಗ್ಲೈಸೆಮಿಯಾ ತಪ್ಪಿಸಲು
 • ಜೀವನ ಶೈಲಿ ಮತ್ತು ತಿನ್ನುವ ಆಯ್ಕೆಯಲ್ಲಿ ಹೆಚ್ಚಿನ ಸಾಧ್ಯತೆಗಳು
 • ಮಲಗುವ ಸಮಯದಲ್ಲಿ ಬದಲಾವಣೆ ಬಯಸಿದಲ್ಲಿ (ಉದಾ: ತಡವಾಗಿ ಮಲಗಲು ಬಯಸಿದಲ್ಲಿ)
 • ರಕ್ತದ ಸಕ್ಕರೆ ಮಟ್ಟದ ವಿಪರೀತ ಏರಿಳಿಕೆಯ ಬಾಧೆ ಇಲ್ಲದೇ ಕ್ರೀಡೆ ಅಥವಾ ವ್ಯಾಯಾಮದಲ್ಲಿ ಬಾಗವಹಿಸಲು ಇಚ್ಛಿಸಿದಲ್ಲಿ.

ಮೇಲಿನವುಗಳು ಸ್ಥೂಲವಾದ ಮಾಹಿತಿ ಮಾತ್ರ. ಇನ್ಸುಲಿನ್ ಪಂಪ್ ಉಪಯೋಗದಲ್ಲಿ ಪರಿಣತಿ ಉಳ್ಳ ನಿಮ್ಮ ವೈದ್ಯರನ್ನು ಅಥವಾ ಎಂಡೋಕ್ರೈನಾಲಜಿಸ್ಟ ಅವರನ್ನು ಭೇಟಿ ಮಾಡಿ ನಿಮಗೆ ಇನ್ಸುಲಿನ್ ಪಂಪ್ ಯಾವ ರೀತಿಯ ಅನುಕೂಲ ಒದಗಿಸಬಹುದು ಎಂಬುದರ ಬಗ್ಗೆ ಸವಿವಾರವಾದ ಮಾಹಿತಿ ಪಡೆಯಬಹುದು.

ಇನ್ಸುಲಿನ್ ಪಂಪ್ ಬಳಸಲು ಯಾರು ಸೂಕ್ತವಾದವರಲ್ಲ?

ನಿಮಗೆ ಇನ್ಸುಲಿನ್ ಪಂಪ್ ಚಿಕಿತ್ಸೆಯ ಬಗ್ಗೆ ವಾಸ್ತವಕ್ಕೆ ದೂರವಾದ ಕಲ್ಪನೆ/ಅಪೇಕ್ಷೆಗಳಿದ್ದಲ್ಲಿ – ಉದಾ:

 • ಇದು “ಜೋಡಿಸಿ, ತುಂಬಿಸಿ, ಹಾಗೂ ಮರೆತುಬಿಡಿ” ಮಾದರಿಯಲ್ಲಿ ಕೆಲಸ ಮಾಡಬೇಕು (ನೀವು ಮಧುಮೇಹದ ಬಗ್ಗೆ ವಿಚಾರ ಮಾಡುವುದನ್ನು ಮರೆತೇ ಬಿಡಬೇಕು ಎಂದು)
 • “ನಾನು ಇನ್ನೂ ಎಂದಿಗೂ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳಲಾರೆ!
 • ‘’ನನ್ನ ರಕ್ತದ ಸಕ್ಕರೆಯ ಮಟ್ಟ ಹೇಗಿದ್ದರೇನು!.. (ರಕ್ತದಲ್ಲಿನ ಸಕ್ಕರೆ ಪರಿಶೀಲಿಸಿಲು ಸಿದ್ಧ ಇಲ್ಲ)
 • ‘’ನಾನು ಹೋದಲ್ಲೆಲ್ಲಾ ಮಧುಮೇಹದ ಕಿಟ್ ತೆಗುದುಕೊಂಡು ಹೋಗಲು ಇಷ್ಟವಿಲ್ಲ.
 • ಖಿನ್ನತೆ, ಮನೋವಿಕಾರ ಅಥವಾ ಇತರ ಗುರುತರವಾದ ಮಾನಸಿಕ ರೋಗಗಳು.
 • ಆರ್ಥಿಕ ಮುಗ್ಗಟ್ಟು.

ಮೊದಲಿನಂತೆಯೇ ಈ ಹೇಳಿಕೆಗಳು ಕೂಡಾ ಸಾರ್ವಲೌಕಿಕ ಹಾಗೂ ನಿಮಗೆ ಅನ್ವಯ ಆಗದೇ ಇರಬಹುದು. ಆದುದರಿಂದ ಇನ್ಸುಲಿನ್ ಪಂಪ್ ಉಪಯೋಗದಲ್ಲಿ ಪರಿಣತಿ ಉಳ್ಳ ನಿಮ್ಮ ವೈದ್ಯರನ್ನು ಅಥವಾ ಎಂಡೋಕ್ರೈನಾಲಜಿಸ್ಟ ಅವರನ್ನು ವೈಯುಕ್ತಿಕವಾಗಿ ಭೇಟಿ ಮಾಡಿ ತಿಳಿದುಕೊಳ್ಳುವುದು ಹೆಚ್ಚು ಸೂಕ್ತ.

ಇನ್ಸುಲಿನ್ ಪಂಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಒಂದು ಚಿಕ್ಕ ವಿವರ ನೀಡಬಹುದೇ?

ಇನ್ಸುಲಿನ್ ಪಂಪ್ ಅನ್ನು ಹೆಚ್ಚಾಗಿ ಸೊಂಟದ ಬೆಲ್ಟ್ ಮೇಲೆ ಪೇಜರ್ ಅಥವಾ ಮೊಬೈಲ್ ದೂರವಾಣಿ ಧರಿಸುವಂತೆಯೇ ಧರಿಸಬಹುದು. ಪಂಪ್ ಅನ್ನು ಗಡುಸಾದ ಪ್ಲಾಸ್ಟಿಕ್ ಉಪಯೋಗಿಸಿ ತಯಾರಿಸಲಾಗಿರುತ್ತದೆ. ಅದು ಒಳಗೆ ಒಂದು ಚಿಕ್ಕ ಮೈಕ್ರೋ ಕಂಪ್ಯೂಟರ್ ಹೊಂದಿರುತ್ತದೆ. ಈ ಗಣಕ ಯಂತ್ರ ನಿಮ್ಮ ಶರೀರಕ್ಕೆ ಬೇಕಾದಷ್ಟೇ (ಪ್ರೋಗ್ರಾಮ್ ಮಾಡಲಾದ) ಇನ್ಸುಲಿನ್ ಅನ್ನು ಪ್ಲಾಸ್ಟಿಕ್ ನಳಿಕೆಯ ಮೂಲಕ ತಳ್ಳುತ್ತದೆ. ಹೀಗೆ ಇನ್ಸುಲಿನ್ ನಿಮ್ಮ ಚರ್ಮದ ಕೆಳಗಿರುವ ಕೊಬ್ಬಿನ ಮೂಲಕ ರಕ್ತವನ್ನು ಸರಿಯಾದ ಸಮಯ ಮತ್ತು ಪ್ರಮಾಣದಲ್ಲಿ ಸೇರುತ್ತದೆ ಹಾಗೂ ನಿಮ್ಮ ಸಕ್ಕರೆಯನ್ನು ನಿಯಂತ್ರಿಸುತ್ತದೆ.

ಪ್ರತಿ ನಿತ್ಯ ಹಲವು ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವುದಕ್ಕಿಂತ ಇನ್ಸುಲಿನ್ ಪಂಪ್ ಹೇಗೆ ಭಿನ್ನ?

ಎರಡರ ಮಧ್ಯೆ ತುಂಬಾ ವ್ಯತ್ಯಾಸವಿದೆ. ಇನ್ಸುಲಿನ್ ಪಂಪ್-ನಲ್ಲಿ ನೀವು ಹಗಲು / ರಾತ್ರಿ , ನಿಮ್ಮ ದೈಹಿಕ ಚಟುವಟಿಕೆಯ ಮಟ್ಟ, ಋತುಚಕ್ರ ಇತ್ಯಾದಿಗಳಿಗೆ ಅನುಗುಣವಾಗಿ ಬೇರೆ ಬೇರೆ ಆದ ಬೇಸಲ್ ಇನ್ಸುಲಿನ್ ಗತಿಯನ್ನು ನಿರ್ಧರಿಸಬಹುದು. ಅದೇ ರೀತಿಯಾಗಿ ಆಹಾರ / ಊಟದಲ್ಲಿರುವ ಸಕ್ಕರೆಯ ಪ್ರಮಾಣಕ್ಕೆ ಅನುಸಾರವಾಗಿ ಬೋಲಸ್ ಇನ್ಸುಲಿನ್ ಮಟ್ಟವನ್ನು ಹೊಂದಿಸಬಹುದು. ಈ ರೀತಿಯಾಗಿ ಕರಾರುವಾಕ್ಕಾದ ಸಕ್ಕರೆಯ ನಿಯಂತ್ರಣ ಸಾಧ್ಯ.

ಇನ್ಸುಲಿನ್ ಪಂಪ್-ನಲ್ಲಿ ಬಳಸುವ ತ್ವರಿತಗತಿಯಲ್ಲಿ ಕೆಲಸಮಾಡುವ ಇನ್ಸುಲಿನ್ ಚರ್ಮದ ಕೆಳಗಿರುವ ಕೊಬ್ಬಿನ ಪದರದಿಂದ ರಕ್ತಕ್ಕೆ ಹೆಚ್ಚು ವಿಶ್ವಸನೀಯವಾಗಿ ಸೇರುವುದರಿಂದ ಅನಿರೀಕ್ಷಿತವಾದ ರಕ್ತದ ಸಕ್ಕರೆಯ ಮಟ್ಟದ ಏರಿಳಿತಗಳನ್ನು ಹತೋಟಿಯಲ್ಲಿ ಇಡಬಹುದು.

ಯಾವ ರೀತಿಯ ಪಂಪ್ –ಗಳು ಲಭ್ಯ?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪಂಪ್ ಕಂಪೆನಿಗಳಿವೆ. ನಿಮಗೆ ಪಂಪ್ ಖರೀದಿಸುವಾಗ ನಿಮಗೆ ಬೇಕಾದ ಸವಲತ್ತುಗಳು ಇರುವ ಹಾಗೂ ಸೂಕ್ತ ಮಾರಾಟದ ನಂತರದ ಸೇವೆ ಉಳ್ಳ ಪಂಪ್ ಖರೀದಿಸುವುದು ಉತ್ತಮ (ಉದಾ: CGMS, ಕಡಿಮೆ ಸಕ್ಕರೆಯ ಸೂಚನೆ). ಈ ಬಗ್ಗೆ ನಿಮ್ಮ ವೈದ್ಯರು ನಿಮಗೆ ಸೂಕ್ತವಾದ ಮಾರ್ಗದರ್ಶನ ನೀಡಬಲ್ಲರು.

ನನಗೆ ಪಂಪ್ ಸೂಕ್ತವೇ ಎಂದು ಪ್ರಯತ್ನಿಸಿ /ಬಳಸಿ ನೋಡಬಹುದುದೇ?

ಹೌದು, ಕಂಪೆನಿಗಳು “ಖರೀದಿಸುವ ಮೊದಲು ಅರಿಯಿರಿ” ಇತ್ಯಾದಿ ಸ್ಕೀಮ್ ಹೊಂದಿವೆ. ಈ ರೀತಿಯಾಗಿ ನೀವು ಪಂಪ್-ನ ಅನುಭವವನ್ನು ಖರೀದಿಸುವ ಮೊದಲೇ ಅರಿತು ನಿಮಗೆ ಅದು ಸೂಕ್ತವೇ ಎಂದು ನಿರ್ಧರಿಸಬಹುದು.

ನಿಮಗೆ ಇನ್ನೂ ಹೆಚ್ಚಿನ ಆಸಕ್ತಿ ಅಥವಾ ಪ್ರಶ್ನೆಗಳಿದ್ದರೆ

ನಮ್ಮನ್ನು ಸಂಪರ್ಕಿಸಿ.

 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

Dr. Gururaja Rao
Sweet Clinic
Ground Floor, Cauvery Buliding,
Besides Arogya Polyclinic
Opp. Sanjeevini Clinic
Near Unity Hospital
Falnir Road
Mangalore
Karnataka, India

Timings: 8AM - 1PM & 3.30PM - 7.30PM.
2/4th Fridays and Sundays* Holiday
Consultations with prior Appointments
Appointments: +91-9481353667

Next Sunday SPECIAL OPD : To be Announced