ಮಧುಮೇಹ ಮತ್ತು ನಿಮ್ಮ ಕಣ್ಣುಗಳು - ತಪ್ಪು ತಿಳುವಳಿಕೆಗಳು ಮತ್ತು ಮಿಥ್ಯಗಳು
 
 
 

ನಿಮ್ಮ ಆರೋಗ್ಯವೇ ನಮ್ಮ ಸ್ಫೂರ್ತಿ

 
 
 
 

ಮಧುಮೇಹದ ಮತ್ತು ನಿಮ್ಮ ಕಣ್ಣುಗಳು - ತಪ್ಪು ತಿಳುವಳಿಕೆಗಳು ಮತ್ತು ಮಿಥ್ಯಗಳು

• [ಮಿಥ್ಯೆ] ನನ್ನ ಹೊಸ ಕನ್ನಡಕದಲ್ಲಿ ಎಲ್ಲವೂ ಸುಸ್ಪಷ್ಟವಾಗಿದೆ, ಹಾಗಾದರೆ ನನ್ನ ಕಣ್ಣುಗಳು ಖಂಡಿತವಾಗಿಯೂ ಆರೂಗ್ಯವಾಗಿವೆ!

Fundus Examination

ಮಧುಮೇಹದ ವಿಸ್ತೃತ ಕಣ್ಣಿನ ಪರೀಕ್ಷೆ

ಇದು ಹಲವು ಮಧುಮೇಹಿಗಳಲ್ಲಿ ಸಾಮಾನ್ಯವಾಗೆ ಬೇರೂರಿರುವ ತಪ್ಪು ನಂಬಿಕೆ. ಅನೇಕ ಸಂಧರ್ಭಗಳಲ್ಲಿ ಮಧುಮೇಹದಿಂದ ಕಣ್ಣಿನಲ್ಲಿ ಉಂಟಾಗುವ ಸಮಸ್ಯೆಗಳಾದ ಗ್ಲುಕೋಮಾ, ಪ್ರಾಲಿಫರೇಟಿವ್ ರೆಟಿನೋಪತಿ, ರೆಟಿನಾದಲ್ಲಿ  ರಕ್ತ ಸ್ರಾವ,  ರೆಟಿನಾದ ಬೇರ್ಪಡುವಿಕೆ ಇವೆಲ್ಲ ತೊಂದರೆ ಇದ್ದರೂ ತುಂಬಾ ತಡವಾಗುವವರೆಗೂ ರೋಗಿಯು ಸುಸ್ಪಷ್ಟವಾದ ದೃಷ್ಟಿ ಹೊಂದಿರಬಹುದು. ತಿಳಿಯುವಾಗ ಲೇಟಾಗಿರುತ್ತೆ.

 

ನಿಮ್ಮ ಕಣ್ಣಿನ ಸ್ಪೆಷಲಿಸ್ಟ್ ವೈದ್ಯರಿಗೆ, ನಿಮ್ಮ ಮಧುಮೇಹದ ಬಗ್ಗೆ ತಿಳಿಸುವುದು ನಿಮ್ಮ ಜವಾಬ್ದಾರಿ.  ಹಾಗೆಯೇ ಪ್ರತಿ ವರ್ಷವೂ ಕನಿಷ್ಠ ಒಂದು ಬಾರಿಯಾದರೂ ಸವಿವರವಾದ ಫಂಡಸ್ ಪರೀಕ್ಷೆ ತಪ್ಪದೇ ಮಾಡಿಸಿರಿ.

 
ನೆನಪಿಡಿ: ದೃಷ್ಟಿ ಪರೀಕ್ಷೆ ಮಧುಮೇಹಿಯ ಕಣ್ಣಿನ ಕೂಲಂಕಷವಾದ ಪರೀಕ್ಷೆ ಅಲ್ಲಾ!

star ಫಳಫಳನೆ ಹೊಳೆಯುವ ಆ ನಿಮ್ಮ ಹೊಸ ಕನ್ನಡಕವು ನಿಮ್ಮ ಕಣ್ಣನ್ನು ಮಧುಮೇಹವೆಂಬ ವೈರಿಯ ದಾಳಿಯಿಂದ ರಕ್ಷಿಸಲಾರವು ಏಕೆಂದರೆ ವೈರಿಯು ನಿಮ್ಮ (ಕಣ್ಣ) ಹಿಂದೆಯೇ ಇರುವನು! star
 

 

• [ಮಿಥ್ಯೆ] ದೃಷ್ಟಿ ಸರಿಯಾಗಿದ್ದರೆ ಮಧುಮೇಹದ ಕಣ್ಣಿನ ತೊಂದರೆ (ರೆಟಿನೋಪತಿ) ಇಲ್ಲವೆಂದೇ ಅರ್ಥ!

ಇಲ್ಲ! ಹೀಗೆಂದುಕೊಂಡರೆ ಅನರ್ಥ! ಪ್ರಾಥಮಿಕ ಹಂತಗಳಲ್ಲಿ ಮಧುಮೇಹಿಗಳಿಗೆ ರೆಟಿನೋಪತಿ ಇದ್ದರೂ ಕೂಡಾ ಯಾವುದೇ ಲಕ್ಷಣ / ತೊಂದರೆ ಕಂಡುಬರುವುದಿಲ್ಲ. ದೃಷ್ಟಿಯೂ ಚೆನ್ನಾಗೇ ಇರುತ್ತದೆ,ಆದರೆ ಅಂಧತ್ವ ಒಂದು ದಿನ ಸಿಡಿಲಿನಂತೆ ಬಂದೆರಗಬಹುದು. ಆಗ ರೆಟಿನೋಪತಿ ಸಾಕಷ್ಟು ಉಲ್ಬಣದ ಹಾಗೂ ಸಂಕೀರ್ಣ ಹಂತ ತಲುಪಿರುವುದರಿಂದ ಹೆಚ್ಚಿನ ಸಂಧಭದಲ್ಲಿ ಯಾವ ಚಿಕಿತ್ಸೆಯೂ ಫಲಕಾರಿಯಾಗದು.

ಅದಕ್ಕೆಂದೇ ನಿಮ್ಮ ವೈದ್ಯರು ನಿಯಮಿತ ಕಣ್ಣಿನ ಪರೀಕ್ಷೆಯ ಬಗ್ಗೆ ಬಾರಿ ಬಾರಿ ಹೇಳುತ್ತಾರೆ.

• [ಮಿಥ್ಯೆ] ನಿಮಗೆ ಇದೇ ತಾನೇ ಮಧುಮೇಹ ಇದೆ ಎಂದು ತಿಳಿದಿದೆ, ಹಾಗಾದರೆ ಇನ್ನು ಕೆಲ ವರ್ಷಗಳ ನಂತರ ನೀವು ಕಣ್ಣಿನ ಪರೀಕ್ಷೆ ಮಾಡಿಸಿದರೆ ಸಾಕು

ತಪ್ಪು! ನಿಜ ಹೇಳಬೇಕೆಂದರೆ,  ಮಧುಮೇಹದ ಅಧ್ಯಯನದಲ್ಲಿ ಒಂದು ಮೈಲುಗಲ್ಲು ಎನ್ನಬಹುದಾದ UKPDS ರೋಗಿಗಳಲ್ಲಿ ಶೇ. 35% ಜನರಿಗೆ ತಮಗೆ ಮಧುಮೇಹ ಇದೆ ಎಂದು ತಿಳಿಯುವ ಸಮಯದಲ್ಲಿ ರೆಟಿನೋಪತಿ ಅದಾಗಲೇ ಇರುವ ವಿಚಾರ ಗಮನಕ್ಕೆ ಬಂದಿದೆ. ಆದುದರಿಂದ ನಾನು, ಈ ಸಂದರ್ಭದಲ್ಲಿ, ನಿಮಗೆ ಮಧುಮೇಹ ಇದೆ ಎಂದು ತಿಳಿದ ದಿನದಂದೇ, ತಡಮಾಡದೇ ನಿಮ್ಮ ಕಣ್ಣನ್ನು ಪರೀಕ್ಷೆ ಮಾಡಿಸುವುದು ಅವಶ್ಯಕ ಎಂದು ಒತ್ತಿ ಹೇಳುತ್ತೇನೆ.  

• [ಮಿಥ್ಯೆ] ಹದಿಹರೆಯದ ಮಧುಮೇಹಿಗಳಲ್ಲಿ /ಮಕ್ಕಳಲ್ಲಿ ಕಣ್ಣಿನ ತೊಂದರೆ (ರೆಟಿನೋಪತಿ) ಕಂಡುಬರುವುದಿಲ್ಲ

ಇದು ತಪ್ಪು ಮಾಹಿತಿ, ಮಕ್ಕಳಲ್ಲಿ, ಹದಿ ವಯಸ್ಸಿನಲ್ಲಿ ಕಂಡುಬರುವ ಜುವೆನೈಲ್ ಡಯಬೆಟಿಸ್ ಮಧುಮೇಹಿಗಳಲ್ಲಿ ರೆಟಿನೋಪತಿಯ ತೊಂದರೆ ಹೆಚ್ಚು ಏಕೆಂದರೆ ಇವರು ಹೆಚ್ಚು ದಿನ ಮಧುಮೇಹದೊಂದಿಗೆ ಜೀವನ ನಡೆಸಬೇಕಾಗುತ್ತದೆ, ಅದರಂತೆಯೇ ಇವರಲ್ಲಿ ಇನ್ಸುಲಿನ್ ಕೊರತೆಯಿಂದ ಮಧುಮೇಹವು ತೀವ್ರ ಸ್ವರೂಪವುಳ್ಳದ್ದಾಗಿರುತ್ತದೆ. ಪ್ರೌಢಿಮೆ, ಗರ್ಭಧಾರಣೆ ಇವೆಲ್ಲಾ, ಈ ರೋಗಿಗಳಿಗೆ ಎದುರಾಗುವ ಸವಾಲುಗಳು.

• [ಮಿಥ್ಯೆ] ಕ್ಯಾಟರಾಕ್ಟ್ (ಕಣ್ಣಿನ ಪೊರೆ / ಮೋತಿಬಿಂದು) ಮಧುಮೇಹದ ರೆಟಿನೋಪತಿಯಿಂದ ನಿಮ್ಮನ್ನು ರಕ್ಷಿಸುತ್ತದೆ

ಸುಳ್ಳು. ಕಣ್ಣಿನ ಪೊರೆಯಿಂದಾಗಿ ರೋಗಿಗೆ ಹೊರ ಜಗತ್ತು ಕಾಣಿಸದಿದ್ದರೆ ವೈದ್ಯರಿಗೆ ಕಣ್ಣಿನ ಒಳಗೆ ನಡೆಯುತ್ತಿರುವ ಮಧುಮೇಹದ  ತಾಂಡವ ನೃತ್ಯ ಕಾಣಿಸುವುದಿಲ್ಲ. ಹೀಗೆ ಕಣ್ಣಿಗೆ ಆದ ಹಾನಿ ಅರಿಯುವಾಗ ತಡವಾಗಿ ಶಾಶ್ವತ ಕುರುಡು ಉಂಟಾಗಬಹುದು.

• [ಮಿಥ್ಯೆ] ಕ್ಯಾಟರಾಕ್ಟ್ (ಕಣ್ಣಿನ ಪೊರೆ / ಮೋತಿಬಿಂದು) ಶಸ್ತ್ರಚಿಕಿತ್ಸೆಯಿಂದ ಮಧುಮೇಹದ ರೆಟಿನೋಪತಿ ಗುಣವಾಗುತ್ತದೆ

ಇದು ಶುದ್ಧ ಸುಳ್ಳು. ವ್ಯತಿರಿಕ್ತವಾಗಿ ರೆಟಿನೋಪತಿ ತೀವ್ರತೆ ಮೊದಲೇ ಹೆಚ್ಚಿದ್ದರೆ ಕ್ಯಾಟರಾಕ್ಟ್  ಶಸ್ತ್ರಚಿಕಿತ್ಸೆಯ ನಂತರ ಅದು ಇನ್ನೂ ಉಲ್ಬಣಗೊಳ್ಳಬಹುದು. ಹೀಗಾದಲ್ಲಿ ಕಣ್ಣಿನ ರಕ್ಷಣೆಗೆ LASER ನಂಥಹ ವಿಶೇಷ ಚಿಕಿತ್ಸೆ ಬೇಕಾಗಬಹುದು.

• [ಮಿಥ್ಯೆ] ಇನ್ಸುಲಿನ್ ತೆಗೆದುಕೊಂಡರೆ ಅಂಧತ್ವ ಉಂಟಾಗುತ್ತದೆ

ಸುಳ್ಳು. ಇನ್ಸುಲಿನ್ ಪ್ರಕೃತಿದತ್ತ, ಸಹಜವಾದ ಹಾರ್ಮೋನ್. ಸರಿಯಾಗಿ ಹೇಳುವುದಾದರೆ, ಸರಿಯಾದ ಸಮಯಕ್ಕೆ ಇನ್ಸುಲಿನ್ ತೆಗೆದುಕೊಂಡರೆ ಅಂಧತ್ವವೇನು, ಮಧುಮೇಹದ ಕಣ್ಣಿನ ತೊಂದರೆ ಶುರುವಾಗುವುದನ್ನೇ ತಡೆಗಟ್ಟಬಹುದು. ಆದರೆ ಈ ರೀತಿಯ ಕೆಲವು ಮೂಢನಂಬಿಕೆಗಳು ಇನ್ನೂ ಕೂಡಾ ನಮ್ಮ ಜನರ ಮನೆ ಮನದಲ್ಲಿ ಬೇರೂರಿ ಅವರನ್ನು ಸೂಕ್ತ ಚಿಕಿತ್ಸೆಯಿಂದ ವಂಚಿತರನ್ನಾಗಿಸುತ್ತಿರುವುದು ದುರದೃಷ್ಟಕರ ಅಲ್ಲದೇ ಇನ್ನೇನು?  

 

ಎಂಡೋಕ್ರೈನಾಲಜಿ ಬಗ್ಗೆ ಮಾಹಿತಿ

 
 
 
Sweet Clinic

 

Dr. Gururaja Rao
Arogya Polyclinic
2nd Floor, Cauvery Buliding,
Near Unity Hospital
Falnir Road
Mangalore
Karnataka, India

Timings:
Sunday Holiday
Consultations with prior Appointments
Appointments: +91-9481353667